ಕನ್ನಡದ ಪ್ರಾಚೀನತೆಯನ್ನು ತೀರ್ಮಾನಿಸಲು, ಬೇರೆ ಭಾಷೆಗಳ ಬರವಣಿಗೆಯ
ದಾಖಲೆಗಳಲ್ಲಿ, ನಮ್ಮ ನಾಡು ಮತ್ತು ನುಡಿಗಳ ಬಗ್ಗೆ ಇರುವ ಉಲ್ಲೇಖಗಳನ್ನು ಹುಡುಕುವ ಅಭ್ಯಾಸವು ಮೊದಲಿನಿಂದಲೂ
ರೂಢಿಯಲ್ಲಿದೆ. ಇದು ಅಷ್ಟೇನೂ ಸಮಾಧಾನಕರವಾದ ವಿಧಾನವಲ್ಲ. ಹಾಗೆಂದು ಅದಕ್ಕಿಂತ ಭಿನ್ನವಾದ ಹಾದಿಗಳನ್ನು
ಸೂಚಿಸುವುದೂ ಕಷ್ಟಸಾಧ್ಯವೇ. ಎರಡನೆಯಯದಾಗಿ, ಇಂತಹ ಹುಡುಕಾಟಗಳು ಬರವಣಿಗೆಯಲ್ಲಿರುವ ದಾಖಲೆಗಳಿಗೆ
ಅತಿಯಾದ ಮಹತ್ವವನ್ನು ಕೊಟ್ಟು, ಮೌಖಿಕ ಪರಂಪರೆಯಲ್ಲಿ ಅಡಗಿರಬಹುದಾದ ಮಾಹಿತಿಗಳನ್ನು ನಿರ್ಲಕ್ಷಿಸುತ್ತವೆ.
ಹಾಗೆ ನೋಡಿದರೆ, ಒಂದು ಭಾಷೆಯ ಇರುವಿಕೆಯ ಬಗ್ಗೆ ಬರವಣಿಗೆಯ ಸಾಕ್ಷಿಗಳು ಇಲ್ಲವೆಂದ ಮಾತ್ರಕ್ಕೆ, ಒಂದಲ್ಲ
ಒಂದು ರೀತಿಯಲ್ಲಿ ಆ ಭಾಷೆಯ ಅಸ್ತಿತ್ವವನ್ನೇ ಅಲ್ಲಗಳೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಕರ್ನಾಟಕವೆಂಬ
ಭೂಪ್ರದೇಶ ಮತ್ತು ಕನ್ನಡವೆಂಬ ಭಾಷೆಗಳ ನಡುವೆ ಒಂದು ಸಮೀಕರಣವನ್ನು ಮಾಡಲಾಗುತ್ತದೆ. ಇದು ಕೂಡ ನೂರಕ್ಕೆ
ನೂರರಷ್ಟು ಸರಿಯಲ್ಲ. ‘ಕರ್ನಾಟಕ’ ಹೆಸರು ಅಥವಾ ಅದರ
ಪೂರ್ವರೂಪಗಳಲ್ಲಿ ಒಂದು, ಚಲಾವಣೆಯಲ್ಲಿ ಇರಲಿ, ಬಿಡಲಿ, ಈ ಪ್ರದೇಶಗಳ ಜನರು ಒಂದಲ್ಲ ಒಂದು ಭಾಷೆಯನ್ನು
ಬಳಸುತ್ತಿದ್ದರು. ಅದು ಕನ್ನಡದ ಹಳೆಯ ರೂಪಗಳಲ್ಲಿ ಒಂದಾಗಿರುವುದು ಅನಿವಾರ್ಯ.
ಮೂಲದ್ರಾವಿಡ ಭಾಷೆಯಿಂದ ಮೂಡಿಬಂದ ಪ್ರಮುಖ ನುಡಿಗಳಲ್ಲಿ ಕನ್ನಡವೂ
ಒಂದು. ಅದನ್ನು ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿಸಲಾಗಿದೆ. ಯಾವುದೇ ಭಾಷೆಯು, ತನ್ನದೇ ಆದ
ಸ್ವತಂತ್ರ ರೂಪವನ್ನು ಪಡೆದುಕೊಳ್ಳುವ ಕೆಲಸವು ನೂರಾರು ವರ್ಷಗಳ ಕಾಲ ನಡೆದಿರುತ್ತದೆ. ಈ ಕಾಲಾವಧಿಯಲ್ಲಿ
ಸ್ಪಷ್ಟವಾಗಿ ಕನ್ನಡವು ಅಸ್ತಿತ್ವದಲ್ಲಿದೆ ಅಥವಾ ಇಲ್ಲ ಎಂದು ಹೇಳಲಾಗದ ಅವಧಿಯೂ ಸಾಕಷ್ಟು ಇರುತ್ತದೆ.
ಭ. ಕೃಷ್ಣಮೂರ್ತಿಯವರು (2000) ಹೇಳುವಂತೆ, ಮೂಲದ್ರಾವಿಡದಿಂದ ಒಂದು ಕಡೆ ತುಳು-ಕೊರಗ, ಹಾಗೂ ಇನ್ನೊಂದು
ಕಡೆ ಕನ್ನಡ, ಪ್ರತ್ಯೇಕವಾದ ಘಟನೆಯು ಕ್ರಿ.ಪೂ. ಐದನೆಯ ಶತಮಾನದಷ್ಟು ಹಿಂದೆಯೇ ನಡೆದಿರಬೇಕು. ಡಿ.ಎನ್.
ಶಂಕರ ಭಟ್ ಅವರು ತಮ್ಮ ‘ಕನ್ನಡ
ಭಾಷೆಯ ಕಲ್ಪಿತ ಚರಿತ್ರೆ’
(1995) ಎಂಬ ಪುಸ್ತಕದಲ್ಲಿ, ಮೂಲದ್ರಾವಿಡದಿಂದ ಮೂಲ ಕನ್ನಡದ ಕಡೆಗೆ ನಡೆದ ಚಲನೆಯನ್ನು ವಿವರವಾಗಿ
ತಿಳಿಸಿದ್ದಾರೆ. ಅವರು ಕನ್ನಡದಲ್ಲಿ ಉಳಿದುಕೊಂಡಿರುವ ಮೂಲದ್ರಾವಿಡ ಅಂಶಗಳನ್ನು ಹೇಳುವಂತೆಯೇ ಬದಲಾವಣೆಯಾಗಿರುವ
ಸಂಗತಿಗಳನ್ನೂ ತಿಳಿಸಿದ್ದಾರೆ. ಮೊದಮೊದಲ ಹಂತಗಳಲ್ಲಿ ಕನ್ನಡ ಮತ್ತು ತಮಿಳುಗಳ ನಡುವೆ ಸಾಕಷ್ಟು ಹೋಲಿಕೆಗಳಿರಬೇಕು.
ನಂತರದ ಶತಮಾನಗಳಲ್ಲಿ ಕನ್ನಡವು ಸಂಸ್ಕೃತದ ದಟ್ಟವಾದ ಪ್ರಭಾವಕ್ಕೆ ಗುರಿಯಾಯಿತು. ಈ ಪ್ರಭಾವವು ತಮಿಳಿನೊಂದಿಗೆ
ಇದ್ದ ಸಂಬಂಧಗಳನ್ನು ಹಿನ್ನೆಲೆಗೆ ತಳ್ಳಿತು ಮತ್ತು ಮರೆಮಾಡಿತು. ಕೆ.ವಿ. ನಾರಾಯಣ ಅವರ ಪ್ರಕಾರ, ಈಗ
ಕನ್ನಡದ ಉಪಭಾಷೆಗಳೆಂದು ಕರೆಸಿಕೊಳ್ಳುತ್ತಿರುವ ಅನೇಕ ಬುಡಕಟ್ಟುಗಳ ಭಾಷೆಗಳು, ಕನ್ನಡದ ಪ್ರಾಚೀನರೂಪಗಳಿಗೆ
ಹತ್ತಿರವಾಗಿರಬಹುದು.
ಕನ್ನಡದ ಪ್ರಾಚೀನತೆಯ ಬಗ್ಗೆ ಸಾಮಾನ್ಯವಾಗಿ. ಒದಗಿಸುವ ಸಾಕ್ಷಿಗಳನ್ನು,
ಸಂಸ್ಕೃತ-ಪ್ರಾಕೃತ ಮೂಲಗಳು, ದ್ರಾವಿಡ-ತಮಿಳು ಮೂಲಗಳು ಮತ್ತು ನಮ್ಮ ದೇಶದ ಆಚೆಗೆ ಸಿಕ್ಕಿರುವ ಮಾಹಿತಿಗಳಿಂದ
ಸಂಗ್ರಹಿಸಲಾಗಿದೆ. ಇನ್ನು ಮುಂದೆ, ಕನ್ನಡ ನಾಡು ಮತ್ತು ನುಡಿಗಳ ಪ್ರಾಚೀನತೆಯ ಬಗ್ಗೆ ಸಾಂಪ್ರದಾಯಿಕವಾಗಿ
ಕೊಡಲಾಗುವ ಆಕರಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, ಈ ಮಾಹಿತಿಗಳನ್ನು ಈಗಾಗಲೇ ಮಂಡಿಸಿರುವ ವಾದದ ಹಿನ್ನೆಲೆಯಲ್ಲಿಯೇ
ನೋಡಬೇಕು.
- ಕೆಲವು ವಿದ್ವಾಂಸರು ಸಂಸ್ಕೃತದ ಛಾಂದೋಗ್ಯ ಉಪನಿಷತ್ತಿನಲ್ಲಿ
ಬರುವ ‘ಮಿಟಚಿ’ (ಮಿಡತೆ),
‘ಚೆನ್’ (ಚಂದ್ರ) ಮುಂತಾದ
ಪದಗಳ ಆಧಾರದ ಮೇಲೆ, ಕನ್ನಡದ ಹಳಮೆಯನ್ನು ವೇದಗಳ ಕಾಲಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.
- ‘ಪದ್ಮಪುರಾಣ’ ಮತ್ತು
‘ಮಾರ್ಕಂಡೇಯ
ಪುರಾಣ‘ಗಳಲ್ಲಿ
‘ಕರ್ನಾಟಕ’ ಎಂಬ ಪದವು ಕಾಣಿಸಿಕೊಂಡಿದೆ.
- ಸಂಸ್ಕೃತದ ಮಹಾಕಾವ್ಯಗಳಾದ
‘ರಾಮಾಯಣ’ ಮತ್ತು ‘ಮಹಾಭಾರತ’ಗಳಲ್ಲಿ ‘ಕರ್ನಾಟಕ’ದ ಪ್ರಸ್ತಾಪವು ಅನೇಕ ಬಾರಿ ಬಂದಿದೆ.
- ಹಾಲರಾಜನು, ಕ್ರಿ.ಶ. 150 ರಲ್ಲಿ ಪ್ರಾಕೃತ ಭಾಷೆಯಲ್ಲಿ
ಬರೆದಿರುವ ‘ಗಾಥಾಸಪ್ತಶತಿ‘ ಎಂಬ ಕಾವ್ಯದಲ್ಲಿ
ಬರುವ ‘ತೀರ್’,
‘ತುಪ್ಪ’, ‘ಪೆಟ್ಟು’,
‘ಪೊಟ್ಟು’ ಮುಂತಾದ ಪದಗಳು
ಕನ್ನಡದವೆಂದು ತೋರುತ್ತದೆ.
- ತಮಿಳು ಭಾಷೆಯ ಬಹು ಹಳೆಯ ಕಾವ್ಯವಾದ, ಸಂಗಂ ಯುಗಕ್ಕೆ ಸೇರಿದ,
‘ಸಿಲಪ್ಪದಿಕಾರಂ‘ ಈ ಪ್ರದೇಶದ ಜನರನ್ನು
‘ಕರುನಾಡಗರ್’ ಎಂದು ಕರೆದಿದೆ.
- 1904 ರಲ್ಲಿ ಪ್ರೊ. ಹುಲ್ಷ್ ಅವರು,
ಕ್ರಿಸ್ತಪೂರ್ವ ಯುಗಕ್ಕೆ ಸೇರಿದ ‘ಪೇಪಿರಸ್ ಫ್ರಂ ಆಕ್ಸಿರಿಂಕಸ್’’ ಎಂಬ ದಾಖಲೆಯನ್ನು
ಹೆಸರಿಸಿದರು. ಈ ದಾಖಲೆಗಳು ಗ್ರೀಕ್ ಭಾಷೆಯಲ್ಲಿದ್ದವು. ಇವು ಗ್ರೇಟ್ ಬ್ರಿಟನ್ನಿನ
‘ರಾಯಲ್ ಏಷಿಯಾಟಿಕ್
ಸೊಸೈಟಿ’ಯ
ಜರ್ನಲ್ಲಿನಲ್ಲಿ 1904 ರಲ್ಲಿಯ ಪ್ರಕಟವಾದವು. ಇಲ್ಲಿ ಬರುವ ಅನೇಕ ಪದಗಳು ಮತ್ತು ಪದಗುಂಪುಗಳು ಕರಾವಳಿ
ಪ್ರದೇಶದ ಕನ್ನಡಭಾಷೆಗೆ ಸೇರಿದವೆಂದು ಹುಲ್ಷ್ ಅವರು ತೀರ್ಮಾನಿಸಿದರು. ಎಂ. ಗೋವಿಂದ ಪೈ ಅವರು ಈ ಅನಿಸಿಕೆಯನ್ನು
ಸಮರ್ಥಿಸಿದರು. ಬೇರೆ ಕೆಲವು ವಿದ್ವಾಂಸರು ಅವು ತುಳು ಭಾಷೆಯ ಪದಗಳೆಂದು ವಾದಿಸಿದ್ದಾರೆ.
- ಕ್ರಿಸ್ತಶಕ ಐದನೆಯ ಶತಮಾನದಷ್ಟು ಹಿಂದಿನ ಅನೇಕ ಕನ್ನಡ ಶಾಸನಗಳು
ನಮಗೆ ದೊರೆತಿವೆ. ಸಹಜವಾಗಿಯೇ ಆಡುಮಾತಿನ ಕನ್ನಡವು ಆ ಕಾಲಕ್ಕಿಂತ ಹಿಂದೆಯೇ ಇತ್ತೆಂದು ತೀರ್ಮಾನಿಸಬಹುದು.
.
- ತಮಿಳಿನ ಪ್ರಸಿದ್ಧ ಶಾಸನಶಾಸ್ತಜ್ಞರಾದ ಡಾ. ಐರಾವತಂ ಮಹಾದೇವನ್
ಅವರು ಈ ವಿಷಯದಲ್ಲಿ ಒದಗಿಸಿರುವ ಮಾಹಿತಿಗಳು ಬಹಳ ಉಪಯುಕ್ತ ವಾಗಿವೆ. ಅವರು,
‘Early Tamil Epigraphy‘
ಎಂಬ ಗ್ರಂಥದಲ್ಲಿ ವಾದಿಸುವ ಪ್ರಕಾರ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಲಿಖಿತ ದಾಖಲೆಗಳು ಬರುವುದಕ್ಕಿಂತ
ಎಷ್ಟೋ ಹಿಂದಿನಿಂದ ಮೌಖಿಕ ಪರಂಪರೆಯು ಅಸ್ತಿತ್ವದಲ್ಲಿತ್ತು. ಅಶೋಕನ ಬಂಡೆ ಶಾಸನಗಳು ಪ್ರಾಕೃತದಲ್ಲಿದ್ದರೂ
ಆ ಪ್ರದೇಶದ ಜನರ ಆಡು ಮಾತು ಕನ್ನಡವೇ ಆಗಿತ್ತೆಂದು ಅವರು ಹೇಳಿದ್ದಾರೆ. ಅವರ ಕೆಲವು ಅನಿಸಿಕೆಗಳನ್ನು
ಇಲ್ಲಿ ಉದ್ಧರಿಸಲಾಗಿದೆ:
“ಆದಿ
ಕಾಲದಿಂದಲೂ ಆ ಪ್ರದೇಶಗಳ ಜನರ ಮನೆಮಾತು ಕನ್ನಡವೇ ಆಗಿತ್ತು. ಈ ಮಾತಿಗೆ ಸಾಕ್ಷಿಗಳು ಅಗತ್ಯವೆನಿಸಿದರೆ,
ದಕ್ಷಿಣ ಭಾರತದ ಮೇಲುಭಾಗಗಳಲ್ಲಿ ಸಿಕ್ಕಿರುವ ಕಲ್ಲಿನ ಮತ್ತು ತಾಮ್ರದ ಶಾಸನಗಳ ತುಂಬ ಇಡಿಕಿರಿದಿರುವ,
ಕನ್ನಡ ಮತ್ತು ತೆಲುಗುಗಳ ಸ್ಥಳನಾಮಗಳು ಹಾಗೂ ವ್ಯಕ್ತಿನಾಮಗಳನ್ನು ಪರಿಶೀಲಿಸಿದರೆ ಸಾಕು.........ಚಾರಿತ್ರಿಕ
ಯುಗದ ಮೊದಲ ಹಂತಗಳಲ್ಲಿಯೇ, ಕನ್ನಡ ಮತ್ತು ತೆಲುಗುಗಳು ಪ್ರತ್ಯೇಕ ಭಾಷೆಗಳಾಗಿ ಬೆಳೆದಿರಲಿಲ್ಲವೆಂದು
ಹೇಳುವುದು ಕಷ್ಟ. ನಾವು ಈಗ ಚರ್ಚಿಸುತ್ತಿರುವ ಕಾಲಘಟ್ಟಕ್ಕಿಂತ ಎಷ್ಟೋ ಮೊದಲೇ ಈ ಭಾಷೆಗಳು ಸ್ವತಂತ್ರಭಾಷೆಗಳಾಗಿದ್ದವು
ಎನ್ನುವುದನ್ನು ದ್ರಾವಿಡಭಾಷಾ ಅಧ್ಯಯನಗಳು ಖಚಿತಪಡಿಸಿವೆ. (ತೆಲುಗು ಮತ್ತು ಕನ್ನಡಗಳು ದ್ರಾವಿಡಭಾಷಾಕುಟುಂಬದ
ಬೇರೆ ಬೇರೆ ಶಾಖೆಗಳಿಗೆ ಸೇರಿದವು.) ಈ ಬಾಷೆಗಳನ್ನು ಸಾಕಷ್ಟು ಜನನಿಬಿಡವೂ ಅಭಿವೃದ್ಧಿಹೊಂದಿದವೂ ಆದ
ಸಮುದಾಯಗಳು ಬಳಸುತ್ತಿದ್ದವು. ಅ ಜನರು, ಶಾತವಾಹನರಂತಹ ಸುವ್ಯವಸ್ಥಿತವಾದ ರಾಜ್ಯವ್ಯವಸ್ಥೆಗಳಲ್ಲಿ
ಪ್ರಜೆಗಳಾಗಿದ್ದರು. ಆ ಕಾಲದ ಪ್ರಾಕೃತ ಶಾಸನಗಳು ಮತ್ತು ಸಾಹಿತ್ಯದಿಂದ, ಹಾಗೆಯೇ ಅಮರಾವತಿ, ನಾಗಾರ್ಜುನಕೊಂಡ
ಮುಂತಾದ ಕಡೆ ದೊರಕಿರುವ ಶ್ರೇಷ್ಠವಾದ ವಾಸ್ತುಕೃತಿಗಳಿಂದ ತಿಳಿದುಬರುವಂತೆ, ಅವರು ನಾಗರಿಕತೆಯ ಬಹು
ಎತ್ತರದ ನೆಲೆಗಳನ್ನು ತಲುಪಿದ್ದರು. ಅದ್ದರಿಂದ, ಆಕ್ಷರ ಸಂಸ್ಕೃತಿಯು ಪ್ರಾರಂಭವಾಗುವುದಕ್ಕಿಂತ ಮುಂಚಿನ
ಕಾಲದಲ್ಲಿ, ಕನ್ನಡ ತೆಲುಗುಗಳ ಮೌಖಿಕಪರಂಪರೆಯು, ತಮಿಳಿನದಕ್ಕಿಂತ ಕಡಿಮೆ ಶ್ರೀಮಂತವೂ ಅಭಿವ್ಯಕ್ತಿಶೀಲವೂ
ಆಗಿತ್ತೆಂದು ನಂಬಲು ಯಾವುದೇ ಕಾರಣಗಳಿಲ್ಲ.”
ವಾಸ್ತವವಾಗಿ, ಮಹಾದೇವನ್ ಅವರು ಈ ಪ್ರಾಕೃತ ಶಾಸನಗಳಲ್ಲಿ ಹಳಗನ್ನಡದ
ಪ್ರಭಾವವನ್ನು ಗುರುತಿಸಿದ್ದಾರೆ.
9. ಡಾ.ಷ.ಶೆಟ್ಟರ್ ಅವರು ತಮ್ಮ ಸಂಶೋಧಣೆಗಳು ಮತ್ತು ತರ್ಕಗಳಿಂದ ಈ
ವಾದವನ್ನು ’ಎರುಮಿ‘, ‘ಕವುಡಿ’, ‘ಪೊಶಿಲ್’, ‘ತಾಯಿಯರ್’ ಮುಂತಾದ ಪದಗಳಿಗೆ ಹತ್ತಿರವಾದ ತಮಿಳು ಪದಗಳು ದೊರೆಯದಿರುವುದರಿಂದ
ಅವುಗಳು ಕನ್ನಡ ಮೂಲದವೇ ಇರಬೇಕೆಂದು ಈ ವಿದ್ವಾಂಸರ ನಿಲುವು. ಮಹಾದೇವನ್ ಅವರು ಕೊಟ್ಟಿರುವ ಪಟ್ಟಿಗೆ
ಶೆಟ್ಟರ್ ಅವರು ‘ನಾಡು’ ಮತ್ತು
‘ಇಳಯರ್’ ಎಂಬ ಪದಗಳನ್ನೂ
ಸೇರಿಸುತ್ತಾರೆ. ಈ ಶಾಸನಗಳಲ್ಲಿ ಕಂಡುಬರುವ ಕೆಲವು ವ್ಯಾಕರಣದ ಸಂಗತಿಗಳು ಕೂಡ ತಮಿಳಿಗಿಂತ ಕನ್ನಡಕ್ಕೆ
ನಿಕಟವಾಗಿವೆಯೆಂದು ಮಹಾದೇಔನ್ ಅವರು ಅಭಿಪ್ರಾಯ ಪಡುತ್ತಾರೆ. ಈ ಪ್ರದೇಶದಲ್ಲಿ ನಡೆದ ಜೈನಧರ್ಮೀಯರ
ಚಲನವಲನಗಳೇ ಇಂತಹ ಪ್ರಭಾವಕ್ಕೆ ಕಾರಣವಾಗಿವೆಯೆಂದು ಈ ಇಬ್ಬರು ವಿದ್ವಾಂಸರೂ ಅಭಿಪ್ರಾಯ ಪಟ್ಟಿದ್ದಾರೆ.
ಈ ಎಲ್ಲ ಶಾಸನಗಳೂ ಕ್ರಿಸ್ತಪೂರ್ವ ಒಂದನೆಯ ಶತಮಾನದಿಂದ ಕ್ರಿಸ್ತಶಕ ನಾಲ್ಕನೆಯ ಶತಮಾನದವೆರೆಗಿನ ಅವಧಿಗೆ
ಸೇರಿದವು. ಈ ಕ್ಷೇತ್ರದಲ್ಲಿ ಶೆಟ್ಟರ್ ಅವರು ಮಾಡಿರುವ ಕೆಲಸವನ್ನು ಸಂಗ್ರಹವಾಗಿ ಹೇಳಲೂ ಇಲ್ಲಿ ಸಾಧ್ಯವಾಗುವುದಿಲ್ಲ.
ಅವರ ಮೂಲಕೃತಿಯನ್ನೇ ನೋಡುವುದು ಉಪಯುಕ್ತವಾಗುತ್ತದೆ.
10.
ಕನ್ನಡ ಮತ್ತು ಕರ್ನಾಟಕದ ಪ್ರಾಚೀನತೆಯನ್ನು ಸಾಧಿಸುವ ಹಾದಿಯಲ್ಲಿ
ಇಂತಹುದೇ ಮಹತ್ವದ ಕೆಲಸ ಮಾಡಿರುವ, ಕರ್ನಾಟಕದ ಮತ್ತೊಬ್ಬ ವಿದ್ವಾಂಸರು ಶಂ.ಬಾ. ಜೋಷಿಯವರು. ಇವರ ಕೆಲಸವು
ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರಗಳ ಮೇಲೆ ಗಮನ ಹರಿಸಿದೆ. ಇವರ ಬರವಣಿಗೆಯು 1933 ರಷ್ಟು
ಹಿಂದೆಯೇ ಪ್ರಕಟವಾಯಿತು. ಅವರು ವಿಪುಲ ಪ್ರಮಾಣದ ಜನಾಂಗಿಕ, ಚಾರಿತ್ರಿಕ ಮತ್ತು ಭಾಷಿಕ ಸಾಕ್ಷಿಗಳನ್ನು
ಸಂಗ್ರಹಿಸಿದರು. ಅದೆಲ್ಲವನ್ನೂ ಬಳಸಿಕೊಂಡು ಕನ್ನಡ ಮಾತನಾಡುವ ಜನಸಮುದಾಯಗಳು ಗೋದಾವರಿ ನದಿಯ ಉತ್ತರದಲ್ಲಿಯೂ
ಇದ್ದವೆಂದು ತೋರಿಸಿಕೊಡಲು ಪ್ರಯತ್ನಿಸಿದರು. ಅವರು ಕುರ್ಖ್, ಮಾಯೈರರು, ಗೋಲಾರಿ ಹೊಲಿಯರು ಮತ್ತು
ಹಳಬರು ಎಂಬ ಸಮುದಾಯಗಳನ್ನು ಹೆಸರಿಸುತ್ತಾರೆ. ಆ ಸಮುದಾಯಗಳು ಮಾತನಾಡುವ ಭಾಷೆಗಳಲ್ಲಿ ಅನೇಕ ಕನ್ನಡ
ಪದಗಳಿವೆಯೆಂದು ತೋರಿಸಿಕೊಡುತ್ತಾರೆ. ಜೋಶಿಯವರ ಪ್ರಕಾರ, ಅವುಗಳೆಲ್ಲವೂ ಅಲೆಮಾರಿಗಳಾದ ಗೊಲ್ಲರ ಮತ್ತು
ಕುರುಬರ ಸಮುದಾಯಗಳು. ಈ ಸಂಗತಿಗಳನ್ನೂ ಆಧರಿಸಿ ಜೋಶಿಯವರು ಕೂಡ ಕನ್ನಡವು ಕ್ರಿಸ್ತ ಶಕದ ಪ್ರಾರಂಭಕಾಲದಿಂದಲೂ
ಇತ್ತೆಂದು ವಾದಿಸುತ್ತಾರೆ.
ಇಲ್ಲಿಗೆ, ಕನ್ನಡದ ಪ್ರಾಚೀನತೆಯನ್ನು ಕುರಿತು ಬೇರೆ ಬೇರೆ ವಿದ್ವಾಂಸರು
ಮಾಡಿರುವಸಂಶೋಧನೆಗಳ ಹಾಗೂ ತಲುಪಿರುವ ತೀರ್ಮಾನಗಳ ಸಂಗ್ರಹವಾದ ಪರಿಚಯವು ಮುಗಿಯಿತು.
‘ಕರ್ನಾಟಕ-ಪದನಿಷ್ಪತ್ತಿ‘ ಎಂಬ ನಮೂದಿನಲ್ಲಿ
ಇನ್ನಷ್ಟು ಮಾಹಿತಿಗಳು ಸಿಗುತ್ತವೆ. ಅಂತೆಯೇ ಈ ಟಿಪ್ಪಣಿಯ ಕೊನೆಯಲ್ಲಿ ಒದಗಿಸಿರುವ ಪುಸ್ತಕಗಳ ಪಟ್ಟಿಯು
ಈ ದಿಕ್ಕಿನಲ್ಲಿ ಮುಂದುವರಿಯಲು ನೆರವು ನೀಡುತ್ತದೆ.
ಮುಂದಿನ
ಓದು ಮತ್ತು ಲಿಂಕುಗಳು:
- ‘Early Tamil Epigraphy from the Earliest Times
to the Sixth Century A.D.’ by Iravatam Mahadevan, 2003, Harward University Press.
- ‘ಶಂಗಂ
ತಮಿಳಗಂ ಮತ್ತು ಕನ್ನಡ ನಾಡು ನುಡಿ’, ಷ. ಶೆಟ್ಟರ್, 2007, ಅಭಿನವ, ಬೆಂಗಳೂರು.
- ‘ಕಣ್ಮರೆಯಾದ
ಕನ್ನಡ’,
ಶಂ. ಬಾ. ಜೋಶಿ, 1933, ಧಾರವಾಡ
- ‘ಕನ್ನಡ-ಅರ್ಧ
ಶತಮಾನ’,
ಕೆ.ವಿ.ನಾರಾಯಣ, 2007, ಕನ್ನಡ ವಿಶ್ವವಿದ್ಯಾಲಯ, ಹಂಪಿ.